ಜಗತ್ತಿನ ಎಲ್ಲ ಜೀವಿಗಳಲ್ಲಿ ಮನುಷ್ಯನಿಗೆ ವಿಶಿಷ್ಟವಾದ ವರದಾನವಿದೆ, ಅದುವೇ ಮನುಷ್ಯನ ಬುದ್ದಿಶಕ್ತಿ.
ಮನುಷ್ಯನ ಹೊಸಶೋಧನೆಯ ತುಡಿತಕ್ಕೆ ಎಲ್ಲೆಯೇ ಇಲ್ಲ…. ಕಲ್ಲು ಕುಟ್ಟಿ ಬೆಂಕಿ ಹುಟ್ಟಿಸುವದರಿಂದ ಬೆಂಕಿಪೆಟ್ಟಿಗೆ, ಕುಟ್ಟಿ ಕುಟ್ಟಿ ಕಳುಹಿಸುವ ತಂತಿ ಸಂದೇಶದಿಂದ ಅಂತರ್ಜಾಲದ ತುರ್ತು ಸಂದೇಶಕ್ಕೆ ಮುಟ್ಟಿದೆ. ಮಹಾಭಾರತದಲ್ಲಿ ಸಂಜಯ ಅರಮನೆಯಲ್ಲಿ ಕುಳಿತು ಧ್ರುತರಾಷ್ಟ್ರನಿಗೆ ಯುದ್ಧದ ವರ್ಣನೆ ಮಾಡಿದನು, ಈಗ ನಾವು ದೂರದರ್ಶನದ ಸಂಜಯನ ಮುಖಾಂತರ ಭಾರತ-ಪಾಕಿಸ್ತಾನ ಗೂಟಾಟದ (ಕ್ರಿಕೆಟ್) ಯುದ್ಧ ನೋಡುತ್ತೇವೆ. ಮನುಷ್ಯ ತನ್ನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸಲು ಶೋಧನೆಯ ಹಾದಿ ಹಿಡಿದಿದ್ದಾನೆ
ಶೋಧನೆಗಳು ಮತ್ತು ನಮ್ಮ ಜೀವನ – ಈ ಸರಣಿಯಲ್ಲಿ ಶೋಧನೆಗಳ ಬಗ್ಗೆ ಮತ್ತು ನಮ್ಮ ಜೀವನದ ಮೇಲೆ ಅದರ ಪ್ರಭಾವಗಳ ಬಗ್ಗೆ ಚರ್ಚಿಸೋಣ.
ಮೊದಲ ಸರಣಿಯಲ್ಲಿ ಒಂದು ಸಣ್ಣ ಶೋಧನೆಯ ಪರಿಣಾಮ ನೋಡೋಣ. ಕ್ಯಾಲ್ಕುಲೇಟರ್ ಅಥವಾ ಎಣಿಸುಕ ನಮ್ಮೆಲ್ಲರಿಗೆ ಗಣಿತದಲ್ಲಿ ಸಹಾಯ ಮಾಡಲು ತಂದ ಒಂದು ಸಣ್ಣ ಆವಿಷ್ಕಾರ, ಈಗಿನ ಗಣಕ ತಂತ್ರಜ್ಞಾನದ ಮುಂದೆ ಇದು ನಿಜವಾಗಿ ಸಣ್ಣದು. ವಿದ್ಯಾರ್ಥಿಗಳು, ವ್ಯಾಪಾರಿಗಳು,ಕಛೇರಿಗಳಲ್ಲಿ ಸಣ್ಣ ಕೂಡಿಸುವ ಲೆಕ್ಕದಿಂದ ಕಠಿಣ ಗಣಿತದ ಸಮಸ್ಯಗಳಿಗೆ ಎಣಿಸುಕ ಉಪಯೋಗಿಸುತ್ತಾರೆ.ಇದರ ಉಪಯೋಗ ಯಾವ ಹಂತಕ್ಕೆ ಮುಟ್ಟಿದೆಯೆಂದರೆ ತಿಂಗಳ ಹಾಲಿನ ಲೆಕ್ಕ, ಮನೆ ಸಾಮಾನು ಲೆಕ್ಕ ಮನಸ್ಸಿನ್ನಲ್ಲಿ ಮಾಡುವದು ಜನಕ್ಕೆ ಸಾದ್ಯವಿಲ್ಲ. ಇದೆ ರೀತಿ ಎಣಿಸುಕ ಉಪಯೋಗ ಮುಂದುವರೆದರೆ ನಮ್ಮ ಮೆದಳಿನ ಶಕ್ತಿ ಕ್ಷೀಣಿಸಿ ಒಂದು ಸಮಯದಲ್ಲಿ ನಾವು ಎಣಿಸುಕದ ಗುಲಾಮರಾಗುತ್ತೇವೆ.
ಈ ಸರಣಿ ಮುಗಿಸುವ ಮುನ್ನ ಒಂದು ಉದಾಹರಣೆ ನೋಡೋಣ,
ಮಂಗನಿಂದ ಮಾನವ, ಇದು ಎಲ್ಲರಿಗೂ ಗೊತ್ತು. ಮಂಗನಿಂದ ಮಾನವನ ರೂಪಾಂತರದ ಸಮಯದಲ್ಲಿ ಮನಷ್ಯನಿಗೆ ಆ ಹಂತದಲ್ಲಿ ಬಾಲವಿತ್ತು, ಆದರೆ ಅದರ ಉಪಯೋಗ ಮನುಷ್ಯನಿಗೆ ಇರದ ಕಾರಣ ಕ್ರಮೇಣ ಅದು ಮಾಯವಾಯಿತು. ಅದೇ ರೀತಿ ನಮ್ಮ ಮೆದಳಿನ ಶಕ್ತಿ ಕ್ರಮೇಣ ಮಾಯವಾಗುವುದು ಸಾಧ್ಯವಿದೆ ಎಂದು ಹೇಳುತ್ತಾ ನನ್ನ ಮೊದಲ ಸರಣಿಯ ಚರ್ಚೆ ಮುಗಿಸುತ್ತೇನೆ
